ರಾಮತೀರ್ಥ
ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಒಂದು ಗ್ರಾಮ ಹಾಗೂ ಪ್ರಸಿದ್ಧ ತೀರ್ಥಕ್ಷೇತ್ರ. ಅಥಣಿಯಿಂದ ಈಶಾನ್ಯಕ್ಕೆ 24 ಕಿಮೀ ದೂರದಲ್ಲಿದೆ. ಈ ಊರಿಗೆ ಸಮೀಪದಲ್ಲಿರುವ ಅನಂದ ಪರ್ವತ ಎಂಬ ಬೆಟ್ಟದಲ್ಲಿರುವ ಗುಹೆಯಲ್ಲಿ ಆನಂದದಾಯಕಿ ಎಂಬ ದೇವತೆಯ ವಿಗ್ರಹವಿದೆ. ಈ ಗುಹೆಯ ಪೂರ್ವದಲ್ಲಿ ರಾಮೇಶ್ವರ ಎಂಬ ಪ್ರಾಚೀನ ದೇವಾಲಯವಿದೆ. ದೇವಾಲಯದ ಕಂಬಗಳನ್ನು ಸುಂದರವಾಗಿ ಕೆತ್ತಲಾಗಿದೆ. ದೇವಾಲಯದ ಮಹಾದ್ವಾರದ ಮೇಲ್ಗಡೆ ನಟರಾಜನ ವಿಗ್ರಹವಿದೆ. ಪ್ರಾಕಾರದಲ್ಲಿ ನರಸಿಂಹ, ಅಮೃತೇಶ್ವರ, ಮಾರುತಿ, ಕಾಳಭೈರವ ಹಾಗೂ ಬ್ರಹ್ಮದೇವರ ಗುಡಿಗಳಿವೆ. 

ಮೊದಲಿಗೆ ರಾಮೇಶ್ವರ ದೇವಾಲಯವನ್ನು ವೆಂಕಟೇಶ್ವರನ ಹೆಸರಿನಲ್ಲಿ ಕಟ್ಟಲಾಗಿತ್ತೆಂದು ಪ್ರತೀತಿ. ಶ್ರೀರಾಮ ಸೀತೆಯ ಶೋಧಾರ್ಥವಾಗಿ ಸಂಚರಿಸುತ್ತ ಕಹೋಳ ಎಂಬ ಗ್ರಾಮಕ್ಕೆ ಬಂದನೆಂದೂ ಅಲ್ಲಿ ಕಹೋಳ ಋಷಿಗಳ ದರ್ಶನ ಪಡೆದು ಸ್ವಯಂಭೂ ಎನಿಸಿದ ಓಂಕಾರೇಶ್ವರನನ್ನು	 ಪೂಜಿಸಿ ಪಾಶಪತಾಸ್ತ್ರವನ್ನು ಪಡೆದು ಹರಿಹರದಲ್ಲಿ ಬೇದವಿಲ್ಲವೆಂಬ ಸಂಕೇತಕ್ಕಾಗಿ ಈ ಸ್ಥಾನಕ್ಕೆ ರಾಮೇಶ್ವರ ಎಂಬ ಹೆಸರಿಟ್ಟನೆಂದೂ ಅಂದಿನಿಂದ ಇಲ್ಲಿಯ ಅಗ್ರಹಾರಕ್ಕೆ ರಾಮತೀರ್ಥವೆಂದು ಹೆಸರಾಯಿತೆಂದೂ ಶೈವಪುರಾಣದ ರಾಮೇಶ್ವರ ಮಹಾತ್ಮೆಯಲ್ಲಿ ಹೇಳಿದೆ. ಶ್ರೀ ಕಾಶೀವಿಶ್ವೇಶ್ವರ ತನ್ನ ಪರಿವಾರಸಮೇತ ಇಲ್ಲಿ ಬಂದು ನೆಲೆಸಿದನೆಂದು ತ್ರಿಕೋಟಕ ರುದ್ರ ಸಂಹಿತೆಯ ಶೈವಪುರಾಣ ಭಾಗದಲ್ಲಿ ಹೇಳಿವೆ. ಈ ಕ್ಷೇತ್ರದ ಸಮೀಪದಲ್ಲಿ ಹರಿಯುವ ಹಳ್ಳ ಉತ್ತರದ ಗಂಗಾನದಿ ಎಂದು ಪ್ರಸಿದ್ಧವಿದೆ. ಹಳ್ಳದಲ್ಲಿ ಪಾಪನಾಶಿನಿ ಎಂಬ ಮಡು ಇದೆ.

ಈ ಊರಿನಲ್ಲಿ ಪ್ರತಿವರ್ಷ ಮಹಾಶಿವರಾತ್ರಿಯಂದು ರಾಮದೇವರ ಹೆಸರಿನಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ